ಕೋಪಿಪೋಡ

ಸಂದಿಪದಿ ವಂಶದ ಕ್ರಸ್ಟೀಸಿಯ ವರ್ಗಕ್ಕೆ ಸೇರಿದ ಒಂದು ಉಪವರ್ಗ. ಇದರಲ್ಲಿ ಸುಮಾರು 6,000 ಪ್ರಭೇದಗಳಿವೆ. ಎಲ್ಲವೂ ಜಲವಾಸಿಗಳು. ಬಹುಪಾಲು ಪ್ರಭೇದಗಳು ಸೂಕ್ಷ್ಮಜೀವಿಗಳು; ಸಾಮಾನ್ಯವಾಗಿ ಅರ್ಧಮಿಲಿಮೀಟರ್ ಉದ್ದದ ಮಿತಿಯನ್ನು ಮೀರುವುದಿಲ್ಲ. ಕೆಲವು ಬಗೆಗಳು ಸ್ವತಂತ್ರಜೀವನ ನಡೆಸಿದರೆ ಇನ್ನು ಕೆಲವು ಪರತಂತ್ರಜೀವಿಗಳು. ಈ ಗುಂಪಿನ ಪ್ರಾಣಿಗಳಿಗೆ ಸಂಕೀರ್ಣಾಕ್ಷುಗಳಾಗಲಿ, ಕ್ಯಾರಪೇಸ್ ಆಗಲಿ ಇಲ್ಲ; ಸಾಧಾರಣವಾಗಿ ಎದೆಯ ಭಾಗದಲ್ಲಿ ಆರು ಜೊತೆ ಉಪಾಂಗಗಳು ಇವೆ. ಇವುಗಳಲ್ಲಿ ಮೊದಲನೆಯದು ಮತ್ತು ಸಾಮಾನ್ಯವಾಗಿ ಆರನೆಯದು ಇಜ್ಜೋಡು ಉಪಾಂಗಗಳು. ಮಿಕ್ಕವೆಲ್ಲ ಜೇಡಿ ಉಪಾಂಗಗಳು. ಸ್ವತಂತ್ರಜೀವನ ನಡೆಸುವ ಪ್ರಾಣಿಗಳಲ್ಲಿ ದೇಹ ಬುಗುರಿಯಾಕಾರ ಅಥವಾ ಗದೆಯಾಕಾರದ್ದಾಗಿದ್ದು ಖಂಡವಿಂಗಡಣೆಯನ್ನು ಪ್ರದರ್ಶಿಸುತ್ತದೆ. ಪರತಂತ್ರ ಜೀವಿಗಳಲ್ಲಿ ಖಂಡವಿಂಗಡಣೆ ಇಲ್ಲ. ಅಲ್ಲದೆ ಕಾಲುಗಳೂ ಇಲ್ಲ. ಖಂಡವಿಂಗಡಣೆ ಇದರಲ್ಲಿ ನಿರ್ದಿಷ್ಟವಾಗಿ ಹದಿನಾರು ಖಂಡಗಳು ಇರುತ್ತವೆ. ಆದರೆ ಈ ಖಂಡಗಳಲ್ಲಿ ತಲೆ, ಎದೆ ಮತ್ತು ಉದರ ಭಾಗಗಳನ್ನು ನಿಖರವಾಗಿ ಗುರುತಿಸುವುದು ಕಷ್ಟ.

ಈ ಪ್ರಾಣಿಗಳ ಬೆಳೆವಣಿಗೆಯಲ್ಲಿ ನಾಪ್ಲಿಯಸ್ ಡಿಂಬಾವಸ್ಥೆ ಇದೆ. ಉದಾಹರಣೆಗೆ, ಸೈಕ್ಲೋಪ್‍ಗಳು-ಸಿಹಿನೀರಿನಲ್ಲಿ ವಾಸಿಸುವ ಇವು ಬುಗುರಿಯಾಕಾರದ್ದಾಗಿವೆ. ನಾರುಹುಣ್ಣಿನ ಹುಳುವಿನ ಡಿಂಬಗಳನ್ನು ಒಬ್ಬರಿಂದ ಒಬ್ಬರಿಗೆ ಹರಡುವಲ್ಲಿ ಇವು ಮಧ್ಯವರ್ತಿಗಳಾಗಿವೆ.
ಡಯಾಪ್ಟೊಮಸ್ ಎಂಬ ಪ್ರಭೇದ ಸಿಹಿನೀರಿನ ವಾಸಿ. ಇದು ಮತ್ತು ಸೈಕ್ಲೋಪ್ ಪ್ರಾಣಿಗಳು ಲಾಡಿಹುಳುವಿನ (ಲಿಗ್ಯುಲ) ಪ್ರಸರಣದಲ್ಲಿ ಅಂತರವರ್ತಿ ಅತಿಥೇಯಗಳಾಗಿ ವರ್ತಿಸುತ್ತವೆ. ಆರ್ಗುಲಸ್, ಲರ್ನಿಯ, ಕ್ಯಾಂಡ್ರೊಕ್ಯಾಂತಸ್‍ಗಳು ಮೀನುಗಳಲ್ಲಿ ಪರತಂತ್ರಜೀವಿಗಳಾಗಿ ಜೀವಿಸುತ್ತವೆ. ಕಲಾನಸ್ ಎಂಬುದು ಕಡಲಿನಲ್ಲಿ ಹೇರಳವಾಗಿ ದೊರೆಯುತ್ತದೆ. ಇದು ಮೀನುಗಳ ಮುಖ್ಯ ಆಹಾರ.

ಕೋಪಿಪೋಡ ಗುಂಪಿನ ಪ್ರಾಣಿಗಳು ಸಾಮಾನ್ಯವಾಗಿ ಮೀನುಗಾರಿಕೆ ದೃಷ್ಟಿಯಿಂದ ಬಹಳ ಮುಖ್ಯವಾದವು. ಅನೇಕ ಮೀನುಗಳ ಪ್ರಧಾನ ಆಹಾರವಾದ ಪ್ಲಾಂಕ್ಟಾನ್‍ನ (ತೇಲುಜೀವಿ ಸಮುದಾಯ) ಬಹುಭಾಗ ಈ ಪ್ರಾಣಿಗಳನ್ನೊಳಗೊಂಡಿದೆ.     							   					(ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ